ಅಳಂದ್
ಈಗ ಗುಲ್ಬರ್ಗ ಜಿಲ್ಲೆಯ ಅಳಂದ್ ತಾಲ್ಲೂಕಿನ ಮುಖ್ಯಸ್ಥಳ. ಹಿಂದೆ ಅಲಂದೆಸಾಸಿರವೆಂಬ ಪ್ರಾಂತ್ಯದ ಮುಖ್ಯಸ್ಥಳವಾಗಿತ್ತು. ಈ ತಾಲ್ಲೂಕಿನ ಜನಸಂಖ್ಯೆ 2,94,445 (2001) ಹಾಗೂ ಪಟ್ಟಣದ ಜನಸಂಖ್ಯೆ 35,308 (2001). ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ ಒಂದು ಶಾಸನವೂ ಸುಮಾರು ಅದೇ ಕಾಲಕ್ಕೆ ಸೇರಿದ ಕೆಲವು ಜೈನವಿಗ್ರಹಗಳೂ ಇಲ್ಲಿವೆ. ಇಲ್ಲಿನ ಲಾಡ್ಲೆ ಮುಶ್ಸೆಕ್ ಎಂಬ ಒಂದು ಗೋರಿಯ ಕೆಲವು ಭಾಗಗಳು ಬಹಮನಿ ವಾಸ್ತುಶೈಲಿಯಲ್ಲಿವೆ. ಬಳಿಯಲ್ಲೇ ತುಕಾರಾಮರ ಪರಮಗುರುವಾದ ರಾಘವಚೈತನ್ಯರ ಸಮಾಧಿಯಿದೆ. ಇಲ್ಲಿಂದ ಸುಮಾರು ಎರಡು ಮೈಲಿ ಉತ್ತರದಲ್ಲಿರುವ ಒಂದು ಸ್ಥಾನ ಶಂಕರಾಚಾರ್ಯರ ಶಿಷ್ಯರಾದ ಹಸ್ತಾಮಲಕರು ತಂಗಿದ್ದ ಸ್ಥಳವೆಂದು ಪ್ರಸಿದ್ಧವಾಗಿದೆ.		      
 (ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ